ಚಗಚೆ

ಲೆಗ್ಯೂಮಿನೋಸೀ ಕುಟುಂಬದ ಸೀಸಾಲ್‍ಪಿನೀ ಉಪಕುಟುಂಬಕ್ಕೆ ಸೇರಿದ ಒಂದು ಏಕವಾರ್ಷಿಕ ಮೂಲಿಕೆಗಿಡ. ಭಾರತಾದ್ಯಂತ ಒಂದು ಕಳೆಗಿಡವಾಗಿ ಬೆಳೆಯುತ್ತದೆ.  ಕ್ಯಾಸಿಯ ಟೋರ ಇದರ ಶಾಸ್ತ್ರೀಯ ಹೆಸರು.  ಗಂಡು ತಗಜೆ, ತರಗಸಿ, ಚಗತೆ ಪರ್ಯಾಯ ನಾಮಗಳು, ಭಾರತದ ಮೈದಾನ ಸೀಮೆಗಳಲ್ಲೆಲ್ಲ ರಸ್ತೆಬದಿಗಳಲ್ಲಿ, ಪಾಳುಬಿದ್ದ ಸ್ಥಳಗಳಲ್ಲಿ, ಕಾಡಿನಲ್ಲಿ ಕರುಚಲಾಗಿ ಬೆಳೆಯುವ ಪುಟ್ಟ ಗಿಡ ಇದು.  ಎಲೆಗಳು ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ ; ಅವು ಸಂಯುಕ್ತ ಬಗೆಯವು. ಒಂದೊಂದು ಎಲೆಗಳ ಕಕ್ಷದಲ್ಲಿ ಜೊತೆಜೊತೆಯಾಗಿ ಅರಳುತ್ತವೆ.   ಇವುಗಳ ಉದ್ದ ಸುಮಾರು 6"-9" .  ಚಪ್ಪಟೆಯಾದ ಹಾಗೂ ಕಪ್ಪುಬಣ್ಣದ ಬೀಜಗಳಿವೆ.

ಬೀಜಗಳಿಂದ ಒಂದು ಬಗೆಯ ನೀಲಿಬಣ್ಣವನ್ನು ಪಡೆಯುವುದಿದೆ. ಬೀಜಗಳನ್ನು ಕಾಫಿ ಬೀಜದ ಬದಲಾಗಿ ಉಪಯೋಗಿಸುವುದುಂಟು. ಅಧಿಕ ಮೊತ್ತದ ಪ್ರೋಟೀನ್ ಇರುವುದರಿಂದ ಬೀಜಗಳನ್ನು ದನಕರುಗಳ ಮೇವಾಗಿ ಬಳಸಬಹುದು. ಚಗಚೆಯ ಎಲೆಗಳ ರಸವನ್ನು ಹುಳಿಮಜ್ಜಿಗೆ, ನಿಂಬೆರಸ, ಕಳ್ಳಿಗಿಡದ ರಸ, ಗಂಜಲ, ಗರಗಲು ಗಿಡದ ರಸದೊಂದಿಗೆ ಸೇರಿಸಿ ಗಜಕರ್ಣ, ತುರಿ ಮುಂತಾದ ಚರ್ಮರೋಗಗಳಲ್ಲಿ ಬಳಸಲಾಗುತ್ತದೆ.  ಚಗಚೆ ಕುಡಿಯ ತುಂಬಳಿ ಹಲವಾರು ಬಗೆಯ ಉದರರೋಗಗಳಿಗೆ ಒಳ್ಳೆಯ ಮದ್ದು.
(ಎಸ್.ಐ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ